Live Sunday, October 25, 2026
Font Size:
ಸುದ್ದಿ 1 min read 13 Views
Sep 21, 2026

ಬರಗಾಲ: ಪ್ರತಿ ಗ್ರಾಪಂ ಮಟ್ಟದಲ್ಲಿ ಮೇವು ಬ್ಯಾಂಕ್ ತೆರೆಯಲು ಒತ್ತಾಯ

ಬರಗಾಲ: ಪ್ರತಿ ಗ್ರಾಪಂ ಮಟ್ಟದಲ್ಲಿ ಮೇವು ಬ್ಯಾಂಕ್ ತೆರೆಯಲು ಒತ್ತಾಯ
Share: WhatsApp Facebook
ಸುದ್ದಿ ಆಲಿಸಿ (Audio News Reader)
Listen to full article narration

ಮಧುಗಿರಿ: ತಾಲೂಕನ್ನು ಬರಪೀಡಿತ ಎಂದು ಘೋಷಿಸಿದ್ದರೂ ಜಾನುವಾರುಗಳಿಗೆ ಮೇವು ದೊರೆಯದ ಪರಿಸ್ಥಿತಿ ನಿರ್ಮಾಣವಾಗಿದೆ. ತಕ್ಷಣ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮೇವು ಬ್ಯಾಂಕ್ ತೆರೆಯಬೇಕು ಎಂದು ತುಮುಲ್ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ಒತ್ತಾಯಿಸಿದರು.

ಪಟ್ಟಣದ ದಂಡಿಮಾರಮ್ಮ ದೇವಸ್ಥಾನದಿಂದ ನೂರಾರು ರೈತರೊಂದಿಗೆ ಕಾಲ್ನಡಿಗೆಯಲ್ಲಿ ಉಪವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ, ಉಪವಿಭಾಗಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.

ಮುಂಗಾರು ಕೈಕೊಟ್ಟಿದ್ದು, ಬೋರ್‌ವೆಲ್‌ಗಳು ಬತ್ತಿಹೋಗಿವೆ. ₹400 ನೀಡಿದರೂ ಒಂದು ಹೊರೆ ಮೇವು ಸಿಗದ ಪರಿಸ್ಥಿತಿ ಇದೆ. ತಾಲೂಕಿನಲ್ಲಿ ಸುಮಾರು 40 ಸಾವಿರ ಜಾನುವಾರುಗಳಿದ್ದು, ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಮೇವು ಬ್ಯಾಂಕ್‌ಗಳನ್ನು ಆರಂಭಿಸಿ, ಒಂದು ಹೊರೆಗೆ ನಿಗದಿತ ದರ ನಿಗದಿಪಡಿಸಿ ಮೇವು ಒದಗಿಸಬೇಕು ಎಂದರು.

ಖಾಸಗಿ ಫೀಡ್ ಬೆಲೆ ಚೀಲಕ್ಕೆ ₹100ರಷ್ಟು ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಹಾಲಿನ ದರವನ್ನು ಕನಿಷ್ಠ ₹10 ಹೆಚ್ಚಿಸಬೇಕು ಹಾಗೂ ಸರ್ಕಾರದ ಸಹಾಯಧನವನ್ನು ₹5ರಿಂದ ₹10ಕ್ಕೆ ಏರಿಸಬೇಕು ಎಂದು ಆಗ್ರಹಿಸಿದರು.

ಎತ್ತಿನಹೊಳೆ ಯೋಜನೆಯ ಕಾಮಗಾರಿ ಕುಂಠಿತವಾಗಿದ್ದು, ಪೈಪ್‌ಲೈನ್ ಮೂಲಕ 1 ಟಿಎಂಸಿ ಹೇಮಾವತಿ ನೀರನ್ನು ಮಧುಗಿರಿ ಭಾಗಕ್ಕೆ ಹರಿಸಬೇಕು ಎಂದು ಒತ್ತಾಯಿಸಿದರು.

ಪುರಸಭೆ ಮಾಜಿ ಸದಸ್ಯ ಎಂ.ಆರ್. ಜಗನ್ನಾಥ್ ಮಾತನಾಡಿ, ಮಧುಗಿರಿ, ಕೊರಟಗೆರೆ ಹಾಗೂ ಪಾವಗಡ ತಾಲೂಕುಗಳು ತೀವ್ರ ಬರಗಾಲದಿಂದ ಸಂಕಷ್ಟಕ್ಕೀಡಾಗಿವೆ. ಮೇವು ಮತ್ತು ನೀರಿನ ಕೊರತೆ ಎದುರಾಗಿದ್ದು, ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದರು.

ಮಾಜಿ ಜಿ.ಪಂ. ಸದಸ್ಯ ಎಸ್.ಡಿ. ಕೃಷ್ಣಪ್ಪ ಮಾತನಾಡಿ, ಕುಡಿಯುವ ನೀರು, ಮೇವು ಹಾಗೂ ವಿದ್ಯುತ್ ಸಮಸ್ಯೆ ಎದುರಾಗಿದೆ. ತಾಲೂಕಿನ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಇಚ್ಛಾಶಕ್ತಿ ತೋರಬೇಕು ಎಂದು ಒತ್ತಾಯಿಸಿದರು.

15 ದಿನಗಳಲ್ಲಿ ಮೇವು ಬ್ಯಾಂಕ್ ತೆರೆಯದಿದ್ದರೆ ಕೊಂಡವಾಡಿ ಚಂದ್ರಶೇಖರ್ ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ಮುಖಂಡರು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಸುಮುಕ್, ಮಿಲ್ ಚಂದ್ರು, ಧಬ್ಬೇಘಟ್ಟ ಕಾಂತಣ್ಣ, ವನಜಾಕ್ಷಿ, ಬೋರ್‌ವೆಲ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.